ಶಿಶುಮಾಯಣ
	1472. ಜೈನಕವಿ. ತ್ರಿಪುರದಹನ ಸಾಂಗತ್ಯ, ಅಂಜನಾಚರಿತೆ ಎಂಬ ಎರಡು ಸಾಂಗತ್ಯಕೃತಿಗಳ ಕರ್ತೃ. ಈತನ ಕಾಲದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಈತನ ಜೀವನದ ಬಗೆಗಿನ ವಿವರಗಳು ಈತನ ಕಾವ್ಯಗಳಿಂದ ತಿಳಿದುಬರುತ್ತದೆ. ಚಪ್ಪನ್ನ ದೇಶದ ನಯನಾಪುರ ಈತನ ಊರು. ತಂದೆ ಬೊಮ್ಮಸೆಟ್ಟಿ, ತಾಯಿ ನೇಮಾಂಬಿಕೆ, ಗುರು ಕಾಣೂರ್ಗಣದ ಭಾನುಮುನಿಪ. ಈತನಿಗೆ ಹಸುಳೆಮಾಯಣ, ತರಳಮಾಯಣ ಎಂಬ ಪರ್ಯಾಯ ನಾಮಗಳಿದ್ದುವೆಂದು ತಿಳಿದುಬರುತ್ತದೆ. ಪೂರ್ವಕವಿಗಳ ಪೈಕಿ ಪಂಪ, ರನ್ನ, ಜನ್ನ ಮೊದಲಾದವರನ್ನು ಸ್ಮರಿಸಿದ್ದಾನೆ.

	ತ್ರಿಪುರದಹನ ಸಾಂಗತ್ಯದಲ್ಲಿ 282 ಪದ್ಯಗಳಿವೆ. ಪುರಾಣ ಪ್ರಸಿದ್ಧವಾದ ಶೈವ ಸಂಪ್ರದಾಯದ ತ್ರಿಪುರದಹನದ ಕತೆಯನ್ನು ಜೈನತತ್ತ್ವಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಂಡಿದ್ದಾನೆ. ಜನನ, ಜರಾ, ಮರಣಗಳೇ ಇಲ್ಲಿಯ ತ್ರಿಪುರಗಳು. ಜೀವ, ಈ ತ್ರಿಪುರಗಳನ್ನು ದಹಿಸಿ ಜೀವಮೋಕ್ಷ ಪಡೆಯುವುದರ ಬಗೆಗೆ ಕವಿ ಹೇಳಿದ್ದಾನೆ.

	ಅಂಜನಾಚರಿತೆಯಲ್ಲಿ 15 ಸಂಧಿಗಳೂ 6,000 ಪದ್ಯಗಳೂ ಇವೆ. ರವಿಷೇಣ ಸಂಸ್ಕøತದಲ್ಲಿ ಬರೆದಿರುವ ಪದ್ಮಚರಿತದ ಒಂದು ಭಾಗವಾದ ಅಂಜನಾಚರಿತೆಯನ್ನು ಶಿಶುಮಾಯಣ ಬೃಹತ್‍ಕಾವ್ಯವಾಗಿ ಮಾಡಿದ್ದಾನೆ. ಇಲ್ಲಿ ಕಥಾನಾಯಕ ಹನುಮಂತ ಎಂಟುಸಾವಿರ ಸ್ತ್ರೀಯರನ್ನು ಮದುವೆಯಾಗುತ್ತಾನೆ. ಕಡೆಯಲ್ಲಿ ಎಲ್ಲರೂ ಜೈನದೀಕ್ಷೆ ಪಡೆಯುತ್ತಾರೆ.

	ಈತನ ಶೈಲಿ ಸರಳವಾಗಿದೆ. ಈತನನ್ನು ಮಹಾಕವಿ ಎನ್ನಲಾಗದಿ ದ್ದರೂ ಜನಸಾಮಾನ್ಯರ ಕವಿ ಎನ್ನಬಹುದು.   
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ